ಕಿಡರ್ಲಿನನ್ - ವಾಕ್ಟರ್, ಆಲ್ಫ್ರೆಡ್ ಫಾನ್

 1852-1912. ಜರ್ಮನಿಯ ರಾಜ್ಯನೀತಿಜ್ಞ. ಬಿಸ್ಮಾರ್ಕನ ಉತ್ತರಾಧಿಕಾರಿ ಎಂದು ಪರಿಗಣಿತನಾಗಿದ್ದನೆಂಬ ಭಾವನೆ ಈಚಿನವರೆಗೂ ಇತ್ತು. ಈ ಭಾವನೆ ತಪ್ಪೆಂಬುದು ಈಚಿನ ಸಂಶೋಧನೆಯಿಂದ ಸ್ಥಿರವಾಗಿದೆ. 1852ರ ಜುಲೈ 10ರಂದು ಜರ್ಮನಿಯ ಸ್ಟಟ್‍ಗರ್ಟ್ ನಗರದಲ್ಲಿ ಬ್ಯಾಂಕೊಂದರ ಒಡೆಯನಾಗಿದ್ದ ರಾಬರ್ಟ್ ಕಿಡರ್ಲಿನ್ ಮತ್ತು ಅವನ ಪತ್ನಿ ಬ್ಯಾರೊನೆಸ್ ಮೇರಿ ಫಾನ್ ವಾಕ್ಟರ್ ಇವರ ಮಗ. ಕಿಡರ್ಲಿನ್-ವಾಕ್ಟರ್ 1870-71ರಲ್ಲಿ ಫ್ರಾನ್ಸ್ ಮತ್ತು ಜರ್ಮನಿಗಳ ನಡುವೆ ನಡೆದ ಯುದ್ಧದಲ್ಲಿ ಭಾಗವಹಿಸಿದ್ದ. ಅನಂತರ ಕಾನೂನಿನ ಅಭ್ಯಾಸ ಮಾಡಿ. 1879ರಲ್ಲಿ ಜರ್ಮನಿಯ ವಿದೇಶಾಂಗ ವ್ಯವಹಾರ ಶಾಖೆಯನ್ನು ಸೇರಿದ. ವಿದೇಶಾಂಗ ಕಚೇರಿಯ ಪ್ರತಿನಿಧಿಯಾಗಿ ಜರ್ಮನ್ ಚಕ್ರವರ್ತಿ ಎರಡನೆಯ ವಿಲಿಯಂನೊಡನೆ ದೇಶ ಸಂಚಾರ ಮಾಡಿದ. ವಾಕ್ಟರ್ ಮುಂಗೋಪಿ. ಅದರಿಂದಾಗಿ ಇವನಿಗೆ ಚಕ್ರವರ್ತಿಯ ಬೆಂಬಲ ತಪ್ಪಿಹೋಯಿತು. 1900ರಲ್ಲಿ ಬುಕಾರೆಸ್ಟಿಗೆ ರಾಯಭಾರಿಯಾಗಿ ಇವನ ನೇಮಕವಾಯಿತು. ಆದರೆ ವಿದೇಶಾಂಗ ಮಂತ್ರಿ ಮಾರ್ಷಲ್‍ಫಾನ್ ಬಿಬರ್‍ಸ್ಟೀನ್ ಇವನ ಪರವಾಗಿದ್ದ. ಬರ್ಲಿನ್-ಬಾಗ್ದಾದ್ ರೈಲು ಮಾರ್ಗ ನಿರ್ಮಾಣದ ಯೋಜನೆಗೆ ತುರ್ಕಿಯ ಬೆಂಬಲ ಪಡೆಯಲು ಇಸ್ತಾನ್‍ಬುಲ್‍ಗೆ ಹೋಗುವ ಅವಕಾಶ ದೊರಕಿತು. 1908ರಲ್ಲಿ ಜರ್ಮನಿಯ ಉಪವಿದೇಶಾಂಗ ಮಂತ್ರಿಯಾಗಿ ಇವನ ನೇಮಕವಾಯಿತು. ಬಾಸ್ನಿಯ-ಹರ್ಸಿ ಗೋವಿನಗಳನ್ನು ಆಸ್ಟ್ರಿಯ-ಹಂಗರಿ ಆಕ್ರಮಿಸಿಕೊಂಡಾಗ ಉಂಟಾದ ಉತ್ಕಟ ಪರಿಸ್ಥಿತಿಯನ್ನು ನಿವಾರಿಸುವುದರಲ್ಲಿ ಕಿಡರ್ಲಿನ್-ವಾಕ್ಟರ್ ಯಶಸ್ಸು ಗಳಿಸಿದ. ರಷ್ಯಕ್ಕೆ ಒಂದು ಎಚ್ಚರಿಕೆ ಪತ್ರವನ್ನು ಬರೆದು, ಅದು ಸರ್ಬಿಯ ದೇಶಕ್ಕೆ ಬೆಂಬಲ ನೀಡದಂತೆ ಮಾಡಿದ. 1910ರಲ್ಲಿ ಈತನನ್ನು ಸರ್ಕಾರದ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು.

1911ರಲ್ಲಿ ಮೊರಾಕೋ ಸಂಬಂಧವಾಗಿ ಕಿಡರ್ಲಿನ್-ವಾಕ್ಟರ್ ಕೈಕೊಂಡ ಒಂದು ಅನಿಷ್ಟ ಕ್ರಮದಿಂದಾಗಿ ಅಂತರರಾಷ್ಟ್ರೀಯ ಕ್ಷೇತ್ರದಲ್ಲಿ ಆತ ಕುಖ್ಯಾತಿ ಗಳಿಸಿದ. ಫ್ರೆಂಚರು ಮೊರಾಕೋದ ರಬಾತ್ ಮತ್ತು ಫೆಜ್ ಪಟ್ಟಣಗಳನ್ನು ಆಕ್ರಮಿಸಿಕೊಂಡಾಗ ಮೊರಾಕೋ ಸ್ವಾತಂತ್ರ್ಯ ಸಂಪೂರ್ಣವಾಗಿ ನಷ್ಟವಾದಂತೆಯೇ ಎಂಬುದಾಗಿ ಕಿಡರ್ಲಿನ್ ವಾಕ್ಟರ್ ಭಾವಿಸಿದ್ದ. ಫ್ರೆಂಚರೊಂದಿಗೆ ಒಪ್ಪಂದ ಮಾಡಿಕೊಂಡು ಮೊರಾಕೋದ ಒಡೆತನದ ಬಗ್ಗೆ ಇತ್ಯರ್ಥ ಮಾಡಿಕೊಳ್ಳಬೇಕೆಂಬುದು ಕಿಡರ್ಲಿನ್-ವಾಕ್ಟರನ ಮೊದಲಿನ ಯೋಚನೆಯಾಗಿತ್ತು. ಆದರೆ ಅನಂತರ ಆತ ಮನಸ್ಸು ಬದಲಾಯಿಸಿದ. ಆಗಡಿರ್‍ಗೆ ಯುದ್ಧ ನೌಕೆಯೊಂದನ್ನು ಕಳಿಸಿದ. ಆ ನಗರವನ್ನು ವಶಪಡಿಸಿಕೊಳ್ಳುವುದು ತನ್ನ ಉದ್ದೇಶವೆಂದು ಜರ್ಮನ್ ಜನತೆ ಭಾವಿಸಲು ಅವಕಾಶ ನೀಡಿದ. ಅಲ್ಲದೆ ಫ್ರಾನ್ಸಿನೊಡನೆ ಸಂಧಾನದಲ್ಲಿ ಗ್ರೇಟ್ ಬ್ರಿಟನಿಗೆ ಪ್ರವೇಶ ದೊರಕದಂತೆ ಪ್ರಯತ್ನಿಸಿದ. ಆಗ ಈ ವ್ಯವಹಾರದಲ್ಲಿ ಇಂಗ್ಲೆಂಡಿನಲ್ಲಿ ಅಧಿಕಾರದಲ್ಲಿದ್ದ ಲಿಬರಲ್ ಪಕ್ಷದ ಪ್ರಧಾನಿ ಕೈ ಹಾಕುವುದಾಗಿ ಲಾಯ್ಡ್ ಜಾರ್ಜ್‍ನಿಂದ ಬೆದರಿಕೆ ಹೋಯಿತು. ಕೊನೆಗೆ 1911ರ ನವೆಂಬರಿನಲ್ಲಿ ಫ್ರಾನ್ಸಿಗೂ ಜರ್ಮನಿಗೂ ಒಪ್ಪಂದವಾಯಿತು. ಫ್ರೆಂಚ್ ಕಾಂಗೋವಿನ ಕೆಲವು ಭಾಗಗಳು ಜರ್ಮನ್ ಕಾಮೆರೂನ್ಸ್‍ಗೆ ಸೇರ್ಪಡೆಯಾಗಬೇಕೆಂದು ಇತ್ಯರ್ಥವಾಯಿತು. ಜರ್ಮನಿಯ ಬಲಪಕ್ಷಗಳಿಗೆ ಇದು ತೃಪ್ತಿ ನೀಡಲಿಲ್ಲ. ಅವರು ಕಿಡರ್ಲಿನ್-ವಾಕ್ಟರನನ್ನು ಟೀಕಿಸಿದರು. ಮೊರಾಕೋ ದೇಶ ಫ್ರಾನ್ಸಿನ ಆಶ್ರಿತರಾಜ್ಯವಾಯಿತು. ಫ್ರೆಂಚರಿಗೂ ಸಮಾಧಾನವಾಗಲಿಲ್ಲ. ಪ್ರಧಾನಿಯಾಗಿದ್ದ ಕೊಯೋನ ಅಧಿಕಾರಕ್ಕೆ ಚ್ಯುತಿ ಬಂತು. ಕಿಡರ್ಲಿನ್-ವಾಕ್ಟರನ ಧೋರಣೆಯಿಂದಾಗಿ ಅಂತರರಾಷ್ಟ್ರೀಯ ಬಿಕ್ಕಟ್ಟು ಅಧಿಕವಾಯಿತು. ದುರ್ವ್ಯಸನಗಳಿಂದ ಆರೋಗ್ಯವನ್ನು ಕೆಡಿಸಿಕೊಂಡಿದ್ದ ಕಿಡರ್ಲಿನ್-ವಾಕ್ಟರ್ 1912ರ ಡಿಸೆಂಬರ್ 30ರಂದು ತೀರಿಕೊಂಡ.       

  (ಎ.ವಿ.ವಿ.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ